Thursday, January 8, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 1

ನನ್ನ ಅಕ್ಷರಾಭ್ಯಾಸಕ್ಕೆ ಅಗೆಯಾದುದು ಹಿಂದೆ ವರ್ಣಿಸಿದಂತಹ ಯಾವುದೊ ಒಂದು ನವರಾತ್ರಿಯ ಸರಸ್ವತೀ ಪೂಜೆಯ ದಿನದಂದು ಎಂದು ತೋರುತ್ತದೆ. ಮಿಂದು ಮಡಿಯಾದ ಮೇಲೆ ಉಡಿದಾರ, ಲಂಗೋಟಿ, ಅಡ್ಡಪಂಚೆಡಗಳ ದೀಕ್ಷೆತೊಟ್ಟು, ಮರಳ ಮೇಲೆ ಅ ಆ ಬರೆದು, ನಡುಬೆರಳ ಮೇಲೆ ತೋರುಬೆರಳನ್ನು ಇಡುವುದು ಹೇಗೆ ಎಂಬುದನ್ನು ತೋರಿಸಿ, ಕಲಿಸಿ, ಅಕ್ಷರ ತಿದ್ದಲು ಹೇಳಿದ್ದರು. ಅದುವರೆಗೆ ಉಡಿದಾರ ಹಾಕುವುದಾಗಲಿ, ಲಂಗೋಟಿ ಕಟ್ಟುವುದಾಗಲಿ, ಅಡ್ಡಪಂಚೆ ಮುಂಡುಸುತ್ತಿ ಉಡುವುದಾಗಲಿ ನನ್ನ ಇಷ್ಟ ಮತ್ತು ಅನುಕೂಲದ ವಿಷಯವಾಗಿದ್ದುದು ಅಂದಿನಿಂದ ಸಾಧಿಸಲೇಬೇಕಾದ 'ನಿಷ್ಠೆ'ಯ ಕರ್ತವ್ಯವಾಗಿಬಿಟ್ಟಿತು!
ಆಗತಾನೆ ಸಮಗ್ರ ಭರತಖಂಡದಲ್ಲಿ ಸುಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯ ಚೆನ್ನಾಗಿ ಬೇರು ಬಿಡಲು ತೊಡಗಿದ್ದ ಕಾಲ. ಆಡಳಿತ ವ್ಯವಸ್ಥೆಯನ್ನು ಕ್ರಮಗೊಳಿಸಿದ ಆಳರಸರು ಅದನ್ನು ಸುಗಮವಾಗಿ ತಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಲು ನಮ್ಮವರನ್ನೆ ದುಡಿವಾಳುಗಳನ್ನಾಗಿ ಮಾಡಲು ನಿರ್ಧರಿಸಿ, ಅದಕ್ಕೆ ಅನುಕೂಲವೂ ಅನುರೂಪವೂ ಆದ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದರು. ಅದರಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಬಹುಕಾಲ ಪರಿಣಾಮಕಾರಿಯಾದದ್ದು - ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯನ್ನೆ ಶಿಕ್ಷಣ ಮಾಧ್ಯಮವನ್ನಾಗಿ ಅಂಗೀಕರಿಸಿದ್ದು.
ನನಗೆ ಬುದ್ಧಿ ತಿಳಿಯುವ ಹೊತ್ತಿಗಾಗಲೆ ನಮ್ಮ ಮನೆ ಕುಪ್ಪಳಿಯಿಂದಲೂ ವಾಟಗಾರು ಮನೆಯಿಂದಲೂ ದೇವಂಗಿ ಮನೆಯಿಂದಲೂ ಹೊಸ ವಿಧ್ಯಾಭ್ಯಾಸಕ್ಕಾಗಿ ತರುಣರು ಹೊರಗಣ ದೂರದೂರುಗಳಿಗೆ ಹೋಗತೊಡಗಿದ್ದರು; ಮತ್ತು ಹೋಗಿ, ವಿದ್ಯಾಭ್ಯಾಸವನ್ನು ನಿಲ್ಲಿಸಿ, ಹಿಂತಿರುತ್ತಯೂ ಇದ್ದರು.
ಆ ಮಲೆನಾಡಿನ ಕಾಡಿನ ಮೂಲೆಯ ಕೊಂಪೆಯಿಂದ ಹುಡುಗರು ಮೈಸೂರಿಗೆ ಆಗಿನ ಕಾಲದಲ್ಲಿ ವಿದ್ಯಾರ್ಜನೆಗೆ ಹೋಗಿದ್ದರೆಂದರೆ ಅಚ್ಚರಿಯಾಗುತ್ತದೆ. ಆದರೆ ಅವರು ಹಾಗೆ ದೂರ ಹೋಗಲು ಸಾಧ್ಯವಾಗಿದ್ದುದೂ, ಹಾಗೆ ಹೋಗುವುದಕ್ಕೆ ಪ್ರಚೋದನೆ ಪ್ರೋತ್ಸಾಹ ಸಹಾಯಗಳು ದೊರಕಿದುದೂ ಕ್ರೈಸ್ತ ಮಿಷನರಿಗಳಿಂದ ಎಂಬುದನ್ನು ನೆನೆದರೆ ನಮ್ಮ ಆಶ್ಚರ್ಯ ವಿಷಾದಾಂಚಿತವೂ ಆಗುವುದರಲ್ಲಿ ಸಂದೇಹವಿಲ್ಲ.
ಅದುವರೆಗೆ ನಮ್ಮ ಉಪ್ಪರಿಗೆಯ ಐಗಳ ಶಾಲೆಗೆ ಕಲಿಸಲು ಬರುತ್ತಿದ್ದವರು ಹೆಚ್ಚಾಗಿ ಕನ್ನಡ ಜಿಲ್ಲೆಯವರೆ. ಅವರ ವಿದ್ಯೆಯ ಮಟ್ಟ ಇರುತ್ತಿದ್ದುದೂ ಅಷ್ಟರಲ್ಲಿಯೆ. ಹುಡುಗರಿಗೆ ಅಕ್ಷರ ಕಲಿಸಿ, ಕನ್ನಡದಲ್ಲಿ ತುಸು ಬರೆಯಲೂ ಓದಲೂ ಹೇಳಿಕೊಟ್ಟರೆ ಮುಗಿಯಿತು. ಆದರೆ ಇನ್ನು ಮುಂದೆ ಕನ್ನಡ ಸಾಕೆ? ಇಂಗ್ಲಿಷಿನವರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಆದೀತೆ? ಆದರೆ ಇಂಗ್ಲಿಷ್ ಹೇಳಿಕೊಡುವವರಾರು? ದೊರೆಗಳ ಭಾಷೆಯನ್ನು?
ಆ ಹಳ್ಳಿಗರು ಇನ್ನೆಷ್ಟು ವರ್ಷಗಳೆ ಕಾಯಬೇಕಿತ್ತೊ ಇಂಗ್ಲಿಷ್ ಕಲಿಯಲು? ಆದರೆ ಮತಪ್ರಚಾರ ಮತ್ತು ಮತಾಂತರ ಉದ್ದೇಶವೆ ಪ್ರಧಾನವಾಗಿದ್ದ ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಸಾಮ್ರಾಜ್ಯದ ಮತ್ತು ಕ್ರೈಸ್ತಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡುಹಳ್ಳಿಗಳಿಗೂ ಕಾಲಿಟ್ಟರು. ಸ್ಕೂಲು ಆಸ್ಪತ್ರೆಗಳನ್ನು ತೆರೆದರು; ಸಾಧ್ಯವಾದಷ್ಟು ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು, ಕನ್ನಡ ಭಾಷೆಗೆ ಪರಿವರ್ತಿತವಾಗಿದ್ದ ಬೈಬಲ್ಲನ್ನೂ ಮ್ಯಾಥ್ಯೂ ಮಾರ್ಕ್ ಲ್ಯಾಕ್ ಜಾನ್ ಮೊದಲಾದ ಕ್ರಿಸ್ತಶಿಷ್ಯ ಸಂತರ ಸುವಾರ್ತೆಗಳನ್ನು ಓದಲು ಹಂಚಿದರು. 'ಹಿಂದೂಗಳಾಗಿ ಇದ್ದೂ ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ', 'ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರು ಮಾಡುತ್ತೇವೆ' ಎಂದು ಮನದಟ್ಟುವಂತೆ ಬೋಧಿಸಿದರು. ಶೂದ್ರರ ಮಕ್ಕಳಿಗೆ ನವೀನ ವಿದ್ಯಾಭ್ಯಾಸ ಮಾಡಿಸಲು ಅವರನ್ನು ಮೈಸೂರು ಬೆಂಗಳೂರುಗಳ ಕ್ರೈಸ್ತ ವಿದ್ಯಾಸಂಸ್ಥೆಗಳಿಗೆ ಕರೆದೊಯ್ದು, ಊಟ ಬಟ್ಟೆ ವಸತಿಗಳನ್ನು ಪುಕ್ಕಟೆಯಾಗಿಯೆ ನೀಡಿ, ಅವರ ತಂದೆ ತಾಯಿ ಬಂಧುಗಳ ಗೌರವ ಕೃತಜ್ಞತೆಗಳನ್ನು ಸೂರೆಹೊಯ್ದರು. ಆ ಎಲ್ಲ ಸ್ನೇಹ ಸೌಹಾರ್ಧ ಸಂಪರ್ಕಗಳ ಪರಿಣಾಮವಾಗಿಯೇ ಕ್ರೈಸ್ತ ಪಾದ್ರಿಗಳು ನಮ್ಮ ಮನೆ ಕುಪ್ಪಳಿಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲಿಷ್ ಬಲ್ಲ ಕ್ರೈಸ್ತ ತರುಣರನ್ನು ನಮಗೆ ಮೇಷ್ಟರನ್ನಾಗಿ ಕಳಿಸುವ ಕೃಪೆ ಮಾಡಿದರು: ಅವರ ಹೆಸರು ಮೋಸಸ್!
.................. ಮುಂದುವರೆಯುವುದು

No comments: